ಸಂಬಂಧಗಳು ಮತ್ತೆ ಹಳಿಗೆ

ವಿಶಾಲ ದೃಷ್ಟಿಯಿಂದ ಭಿನ್ನಾಭಿಪ್ರಾಯಗಳನ್ನು ಹಿಂದಿಕ್ಕಿದ ದೇಶಗಳು

February 08, 2023 10:53 am | Updated 10:53 am IST

ಭಾರತವು ತನ್ನ ಜಿ-೨೦ ಅಧ್ಯಕ್ಷತೆಯ ಈ ವರ್ಷದಲ್ಲಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಹುರಿಗೊಳಿಸುತ್ತಿದೆ. ಇದರ ಭಾಗವಾಗಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ದೆಹಲಿಯಲ್ಲಿ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿಯವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದು, ಕೆನಡಾದೊಂದಿಗೆ ಉತ್ತಮ ಬಾಂಧವ್ಯವು ಸರ್ಕಾರದ ಆದ್ಯತೆ ಆಗಿರುವುದು ಸ್ಪಷ್ಟ. ಶ್ರೀಮತಿ ಜೋಲಿ ಅವರು ಮಾರ್ಚ್‌ನಲ್ಲಿ ನಡೆಯಲಿರುವ ಜಿ-೨೦ ವಿದೇಶಾಂಗ ಸಚಿವರ ಸಭೆಗೆ ಮತ್ತು ಜಿ-೨೦ ಶೃಂಗಸಭೆಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರೊಂದಿಗೆ ಮತ್ತೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಇತರೆ ಜಿ-೨೦ ಸಭೆಗಳಿಗೆ ಕೆನಡಾದ ಇನ್ನು ಹಲವು ಸಚಿವರು ಆಗಮಿಸಲಿದ್ದಾರೆ. ಚೀನಾದೊಂದಿಗೆ ಹದಗೆಡುತ್ತಿರುವ ಕೆನಡಾದ ಸಂಬಂಧಗಳು ಭಾರತದೊಂದಿಗೆ ಸಂಬಂಧ ಸುಧಾರಣೆಗೆ ಒಂದು ಕಾರಣ. ನವೆಂಬರ್‌ನಲ್ಲಿ ಕೆನಡಾ ತನ್ನ ಹೊಸ ಇಂಡೋ-ಪೆಸಿಫಿಕ್ ಕಾರ್ಯತಂತ್ರವನ್ನು ಪ್ರಕಟಿಸಿದ್ದು ಅದರಲ್ಲಿ ಚೀನಾವನ್ನು “ವಿಚ್ಛಿದ್ರಕಾರಕ ಜಾಗತಿಕ ಶಕ್ತಿ” (disruptive global power) ಎಂದು ಗುರುತಿಸಿದ್ದರೆ, ಭಾರತವನ್ನು ತನ್ನ ಬಹುತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಕಾರಣ “ಪ್ರಮುಖ ಮಿತ್ರ” (critical partner) ಎಂದು ಬಣ್ಣಿಸಲಾಗಿದೆ. ಇದರ ಜೊತೆಗೆ, ಅತ್ತ ಚೀನಾದೊಂದಿಗೆ ತನ್ನ ಬೃಹತ್ ವ್ಯಾಪಾರ ವಹಿವಾಟನ್ನು ಇತರೆ ಮಾರುಕಟ್ಟೆಗಳಿಗೆ ಹಂಚಲು ಕೆನಡಾ ನೋಡುತ್ತಿರುವಾಗಲೇ ಇತ್ತ ಭಾರತವು ಅನೇಕ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲು ಉತ್ಸುಕವಾಗಿದೆ. ಅಧಿಕಾರಿಗಳು ಈ ವರ್ಷ “ಮುಂಗಡ ಪ್ರಗತಿ ವ್ಯಾಪಾರ ಒಪ್ಪಂದ” (Early Progress Trade Agreement) ಘೋಷಿಸುವತ್ತ ಕಾರ್ಯಮಗ್ನರಾಗಿದ್ದು, ಶೀಘ್ರದಲ್ಲೇ “ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ” (Comprehensive Economic Partnership Agreement) ವನ್ನು ಅಂತಿಮಗೊಳಿಸುವ ಭರವಸೆ ವ್ಯಕ್ತಪಡಿಸಿರುತ್ತಾರೆ. ೨೦೧೮ರಲ್ಲಿ ಭಾರತ ಕೆನಡಾ ಸಂಬಂಧಗಳಿಗೆ ಮಾರಕವಾದ ಜಸ್ಟಿನ್ ಟ್ರುಡೊ ಅವರ ಭಾರತ ಭೇಟಿ ಮತ್ತು ೨೦೨೦-೨೧ರಲ್ಲಿ ಮೋದಿ ಸರ್ಕಾರ ರೈತ ಆಂದೋಲನವನ್ನು ನಿರ್ವಹಿಸಿದ ರೀತಿಯ ಬಗ್ಗೆ ಅವರ ಟೀಕೆಗಳ ಕಾರಣವಾಗಿ ಎರಡು ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧಗಳು ಮುರಿದುಬಿದ್ದಿದ್ದವು. ಕಳೆದ ವರ್ಷ ಜಿ-೭ ಶೃಂಗಸಭೆಯಲ್ಲಿ ಜಸ್ಟಿನ್ ಟ್ರುಡೊ ಮೋದಿಯವರನ್ನು ಭೇಟಿಯಾದ ಬಳಿಕ ಸಂಬಂಧಗಳು ಮತ್ತೆ ಹಳಿಗೆ ಬರಲು ಪ್ರಾರಂಭಿಸಿದವು.

ಆದರೆ ಭಾರತ ಮತ್ತು ಕೆನಡಾದ ನಡುವೆ ಅನೇಕ ಸಮಸ್ಯೆಗಳು ಇನ್ನೂ ಹೊಗೆಯಾಡುತ್ತಿವೆ. ಕೆನಡಾದಲ್ಲಿ ಮರಳಿ ಕಸುವು ಪಡೆಯುತ್ತಿರುವ ಖಲಿಸ್ತಾನಿ ಪ್ರತ್ಯೇಕತಾವಾದ ಮತ್ತು ಅಲ್ಲಿನ ಸಿಖ್ಖರ ನಡುವೆ “ಜನಮತ”ಕ್ಕೆ (referendum) ಕರೆ ನೀಡುತ್ತಿರುವ ಬಗ್ಗೆ ನವದೆಹಲಿ ಕಳವಳ ವ್ಯಕ್ತಪಡಿಸುತ್ತಲೇ ಇದೆ. ಅಲ್ಲಿನ ಭಾರತೀಯ ಸಮುದಾಯವನ್ನು ಗುರಿಯಾಗಿಸಿದ ದಾಳಿಗಳು ಸಹ ಆತಂಕ ಮೂಡಿಸಿವೆ. ಇದಲ್ಲದೆ ಭಾರತದಲ್ಲಿನ ಬೆಳವಣಿಗೆಗಳ ಬಗ್ಗೆ ಕೆನಡಾದ ಹೇಳಿಕೆಗಳು ಎಂದಾದರೂ ರಾಜತಾಂತ್ರಿಕ ಸಂಬಂಧಗಳಲ್ಲಿ ತೊಡಕುಗಳನ್ನು ತಂದೊಡ್ಡಬಹುದು. ಐತಿಹಾಸಿಕವಾಗಿ ಇದು ದ್ವಿಪಕ್ಷೀಯ ಸಂಬಂಧದಲ್ಲಿನ ಪ್ರಮುಖ ಎಳೆಯಾಗಿದೆ. ಕೆನಡಾದಲ್ಲಿ ದೊಡ್ಡ ಅನಿವಾಸಿ ಭಾರತೀಯ ಸಮಾಜ, ವಿಶೇಷವಾಗಿ ವಿದ್ಯಾರ್ಥಿ ಸಮೂಹ, ಇದ್ದಾಗ್ಯೂ ಕಳೆದ ದಶಕಗಳಲ್ಲಿ ದ್ವಿಪಕ್ಷೀಯ ಸಂಬಂಧವು ಅನೇಕ ಏರಿಳಿತಗಳನ್ನು ಕಂಡಿದೆ. ಭಾರತೀಯ ಪರಮಾಣು ಕಾರ್ಯಕ್ರಮದೊಂದಿಗೆ ಗುರಿತಿಸಿಕೊಂಡ ಮೊದಲ ದೇಶಗಳಲ್ಲಿ ಕೆನಡಾ ಸಹ ಒಂದು. ಆದರೆ ೧೯೭೪ರಲ್ಲಿ ನಾವು ಪರಮಾಣು ಪರೀಕ್ಷೆಗಳನ್ನು ಮಾಡಿದ ತರುವಾಯ ಈ ಸಂಬಂಧಗಳು ಮುರಿದುಬಿದ್ದವು. ೧೯೮೦ರ ದಶಕದಲ್ಲಿ ಸಂಬಂಧಗಳು ಸುಧಾರಿಸುತ್ತಿದ್ದಾಗ ೧೯೮೫ರಲ್ಲಿ ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸಿದ ಖಾಲಿಸ್ತಾನಿ ಗುಂಪುಗಳಿಗೆ ಕೆನಡಾ ಆಶ್ರಯ ನೀಡಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಯಿತು. ೨೦೧೦ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೆನಡಾಕ್ಕೆ ಭೇಟಿಯಿತ್ತು ನಾಗರಿಕ ಪರಮಾಣು ಸಹಕಾರ ಒಪ್ಪಂದ ಮಾಡಿಕೊಳ್ಳುವುದರೊಂದಿಗೆ ಮತ್ತು ೨೦೧೫ರಲ್ಲಿ ಮೋದಿಯವರ ಭೇಟಿಯೊಂದಿಗೆ ಸಂಬಂಧಗಳು ಮತ್ತೆ ಹಳಿಗೆ ಬಂದವು. ಆದರೆ ೨೦೧೮ರ ನಂತರ ಅದು ಮತ್ತೆ ಹಳಿ ತಪ್ಪಿತು. ಈ ವರ್ಷ ಎರಡೂ ದೇಶಗಳು ವಿವಾದಾತ್ಮಕ ರಾಜಕೀಯ ವಿಷಯಗಳನ್ನು ಬದಿಗೆ ಸರಿಸಿದರೆ, ಆರ್ಥಿಕವೂ ಸೇರಿದಂತೆ ಆಯಕಟ್ಟಿನ ಲಾಭಗಳನ್ನು ತರುವಂತೆ ದ್ವಿಪಕ್ಷೀಯ ಸಂಬಂಧಗಳಲ್ಲಿ ಒಂದು ಜಿಗಿತ ಕಾಣಲು ಕಾಲ ಕೂಡಿ ಬಂದಂತಿದೆ.

This editorial has been translated from English, which can be read here.

0 / 0
Sign in to unlock member-only benefits!
  • Access 10 free stories every month
  • Save stories to read later
  • Access to comment on every story
  • Sign-up/manage your newsletter subscriptions with a single click
  • Get notified by email for early access to discounts & offers on our products
Sign in

Comments

Comments have to be in English, and in full sentences. They cannot be abusive or personal. Please abide by our community guidelines for posting your comments.

We have migrated to a new commenting platform. If you are already a registered user of The Hindu and logged in, you may continue to engage with our articles. If you do not have an account please register and login to post comments. Users can access their older comments by logging into their accounts on Vuukle.